ಕ್ಲಾಡೆ, ಜಾರ್ಜ್	
1870-1960.  ಫ್ರೆಂಚ್ ಭೌತ ಮತ್ತು ರಸಾಯನ ವಿಜ್ಞಾನಿ. ಜನನ 1870ನೆಯ ಇಸವಿ ಸೆಪ್ಟೆಂಬರ್ 24ರಂದು. ವಿಜ್ಞಾನಕ್ಷೇತ್ರದಲ್ಲಿ ಈತನ ಅತಿಮುಖ್ಯ ಸಾಧನೆಯೆಂದರೆ ಗಾಳಿ ಮತ್ತು ಇತರ ಕೆಲವು ಅನಿಲಗಳನ್ನು ವಿಶಿಷ್ಟವಾದ ನೂತನ ವಿಧಾನದಿಂದ ದ್ರವೀಕರಿಸಿದ್ದು, ಅಲ್ಲದೆ ಗಾಳಿಯಲ್ಲಿರುವ ವಿವಿಧ ಅನಿಲಘಟಕಗಳನ್ನು ಬೇರ್ಪಡಿಸಿದ್ದು, ಸ್ಥಿರೋಷ್ಣ ಸಂದರ್ಭದಲ್ಲಿ ಅನಿಲವನ್ನು ಹಿಗ್ಗಿಸಿ ಬಾಹ್ಯಬಲಗಳ ವಿರುದ್ಧ ಕೆಲಸ ಮಾಡುವಂತೆ ಮಾಡಿದರೆ ಅದು ತನ್ನ ಶಕ್ತಿಯನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡು ತಂಪಾಗುತ್ತದೆ. ಅನಿಲಗಳನ್ನು ತಂಪುಮಾಡುವ ಈ ವಿಧಾನವನ್ನು ಅನುಸರಿಸಿ ಕ್ಲಾಡೆ ಗಾಳಿಯನ್ನು ದ್ರವೀಕರಿಸಿದ. (ನೋಡಿ- ಅನಿಲ-ದ್ರವೀಕರಣ)

	ಮೊದಲ ಮಹಾಯುದ್ಧದಲ್ಲಿ ಉಪಯೋಗಿಸುತ್ತಿದ್ದ ವಿಷಪೂರಿತ ಅನಿಲಗಳ ತಯಾರಿಕೆಗೆ ಅವಶ್ಯವಾಗಿ ಬೇಕಾಗಿದ್ದ ದ್ರವ ಕ್ಲೋರಿನ್ನನ್ನು ಕ್ಲಾಡೆ ತನ್ನ ಹೊಸ ವಿಧನದಿಂದ ತಯಾರಿಸಿ ಫ್ರೆಂಚ್ ಸರ್ಕಾರಕ್ಕೆ ಒದಗಿಸುತ್ತಿದ್ದ. ಅಲ್ಲದೆ ಜಡ ಅನಿಲಗಳಿಗೆ ಸಂಬಂಧಿಸಿದಂತೆ ರ್ಯಾಂಸೆ ಕೈಗೊಂಡಿದ್ದ ಸಂಶೋಧನೆಗಳಿಗೆ ಬೇಕಾಗಿದ್ದ ದ್ರವೀಕೃತ ಗಾಳಿಯನ್ನು ಕೂಡ ಕ್ಲಾಡೆ ಒದಗಿಸಿದ. ರ್ಯಾಂಸೆಯ ಸಂಶೋಧನೆಗಳ ಫಲವಾಗಿ ದೊರೆತ ಜಡ ಅನಿಲಗಳನ್ನು ಉಪಯೋಗಿಸಿಕೊಂಡು ಕ್ಲಾಡೆ ಸೂಕ್ತ ಸಂದರ್ಭಗಳಲ್ಲಿ ಇವುಗಳ ಮೂಲಕ ಜರುಗುವ ವಿದ್ಯುದ್ವಿಸರ್ಜನೆಯನ್ನು ಪರೀಕ್ಷಿಸಿದ. ಮತ್ತು ತನ್ನ ಈ ಪ್ರಯತ್ನಗಳ ಫಲವಾಗಿ ಜಾಹೀರಾತು ಉದ್ದೇಶಗಳಿಗಾಗಿ ಇಂದು ವ್ಯಾಪಕವಾಗಿ ಉಪಯೋಗಿಸುವ ನಿಯಾನ್ ದೀಪವನ್ನು ತಯಾರಿಸಿ ಅದರಿಂದ ಅಪಾರ ಹಣವನ್ನು ಗಳಿಸಿದ. ಎರಡನೆಯ ಮಹಾಯುದ್ಧ ಕಾಲದಲ್ಲಿ ವಿಚಿ ಸರ್ಕಾರಕ್ಕೆ ಈತ ಬೆಂಬಲ ನೀಡಿದ್ದ ಕಾರಣ 1945ರಲ್ಲಿ ಫ್ರಾನ್ಸ್ ಪುನಃ ಸ್ವತಂತ್ರವಾದ ಬಳಿಕ ಕ್ಲಾಡೆ 5 ವರ್ಷಗಳ ಕಾಲ ಜೈಲುವಾಸ ಅನುಭವಿಸಬೇಕಾಯಿತು. 
	ಕ್ಲಾಡೆ ಗತಿಸಿದ್ದು 1960ನೆಯ ಇಸವಿ ಮೇ 23ರಂದು.                       (ಕೆ.ಎಸ್.ಆರ್.ಐ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ